ಹೊರಡುವ ಮುನ್ನ

ಹೊರಡುವ ಮುನ್ನ
ನಿಲ್ಲು ಒಂದರೆಗಳಿಗೆ.
ರೂಮಿನಲ್ಲಿ ಟ್ರಂಕಿದೆ; ಹಾಸಿಗೆ ಸುತ್ತಿದೆ;
ನೆನಪ ಮುತ್ತುಗಳ ಕೈಚೀಲ ಟೇಬಲ್ಲಿನ
ಮೇಲಿದೆ.
ನಿದ್ದೆಬಾರದಿರುಳು ಕಂಡ
ಕನಸುಗಳು ಮೂಲೆಯಲ್ಲಿ ತೂಕಡಿಸುತ್ತಿವೆ.
ಇನ್ನೇನೇನೋ ಒಳಗೆ. ಅರೆ!
ಬೀಗವೆಲ್ಲಿ?
ಬೇಕೇ?
ಡೇರೆಯ ನೆಲದ ಕಂಪನಡಗಿಸಿ
ಖೋಲಿ ಖಾಲಿ ಮಾಡುವವನಿಗೆ
ಕೀಲಿಕೈ?

* * *

ನಿನ್ನೆ ಸಂಜೆ
ಭಾವನೆಗಳ ಮಳೆಗೆ ಮಾಗಿದ ನೆಲದಲ್ಲಿ
ಮಾತಿನ ನೇಗಿಲು ಹೂಡಿದರು.
“ಭವಿಷ್ಯದ ಬೀಜ ನೆಟ್ಟೇವೆ”ಂದರು.
“ಬಿಟ್ಟು ಹೋಗುತ್ತೀರೆ”ಂದರು.
“ಆಗಾಗ ಬನ್ನಿರೆ”೦ದೂ ಕರೆದರು.
ನಡುನಡುವೆ, ಹಣೆಪಟ್ಟಿ ಸಾಧನೆಯ
ಬೆನ್ನಚೀಲದಿಂದ ಕೆಲವು ಮುತ್ತುಗಳೆಂದು
ತೋರಿದರು. ಕೊನೆಗೆ ಉಲಿದರು
“All the Best”.
ಕಸಕ್ಕನೆ ನಕ್ಕಿತ್ತು ಗೋಡೆ.
ಸುಮ್ಮನಿರೆಂದಿತು ಮೇಲಿನ ಸರ್ಚ್ ಲೈಟ್.
ವರ್ಷ ವರ್ಷದ ರಾಗವಿದು
ಹಾಡು ಕೇಳುವವರು ಬೇರೆಯಸ್ಟೆ.

ಗಾಳಿಯೂ ನಕ್ಕಿತ್ತು;
ಮಾತುಗಳು ಭಾವನಕೇರಿಯವು
ಹೃದಯದ ಗೋಡೆಗೆ ತಾಕಿ ಮಾರ್ಧ್ವನಿಸಬೇಕವು
ಕಿವಿಯ ತಮ್ಮಟೆಗಪ್ಪಳಸಿಯಲ್ಲ.

* * *

ಸಂಜೆ ರಂಗಿನಲಿ
ವೇದಿಕೆಗೆ ನಡೆದು, ನಾನು “ನಾನೇ”
ಎಂದು ಸಿದ್ದಪಡಿಸಿ, ತೋರು ಬೆರಳಿಗೆ
ಧರಿಸಿ ರಿಂಗನು, ಕುಲಕಲು ಚಾಚಿದ
ಕೈಗೆ ಸಿಕ್ಕಿದ್ದು ಆಸ್ತಿ. ರಕ್ತಮಾಂಸಗಳಿಲ್ಲ.
ನಗುವಲ್ಲಿ ಪ್ಲಾಸ್ಟಿಕ್ ಸುಮವರಳಿದುವೆಲ್ಲ
ಮಾತಿನಲ್ಲಿ ತಾಜ್‌ಮಹಲುಗಳೆಸ್ಟೋ ನಕ್ಕವು.
ಆದರೆ ಹಂಪೆ ರೋದಿಸುತ್ತಲೆ ಇತ್ತು.
ತೀರಲ್ಲಿಲ್ಲ
ಮುಖವಾಡದ ಬೆಂಗಾಡಲ್ಲಿಸಂಜೀವನಿಗೆ
ಹುಡುಕಾಟ.

– ಎಂಶ್ರೀ

************

This is what I wrote while walking out of my college hostel room on 30-Apr-1992.