ಜಾರಿಬಿದ್ದ ನಕ್ಷತ್ರ

ಜಾರಿ ಬಿದ್ದ ನಕ್ಷತ್ರ
ಇದು.
ವಿಶ್ವ ಬ್ರಹ್ಮಾಂಡದನಂತ ತಿರುಗಣೆಯೊಳಗಿನಿಂದ
ಜಾರುತುರುಳಿದೆ; ಪಥಬಿಟ್ಟು,
ಪ್ರಭೆ ತೊರೆದು, ಅದಾವುದೋ
ಮಾಯೆಯೊಳಗೆ ಸಿಲುಕಿ.

ಸಂಖ್ಯಾಸಂಖ್ಯ ಗ್ರಹತಾರೆಗಳ ಗುಚ್ಛದಲೊಂದು
ಮಿಂಚಂತೆ ಸುತೇಜದಿ ನಗುತ
ತಿರುಗುತಿತ್ತು, ತನ್ನದೇ ಕಕ್ಷೆಯಲ್ಲಿದು.
ಇದ್ದಕ್ಕಿದ್ದಂತೆ
ಯಾವ ಗುರುತ್ವಾಕರ್ಷಣೆ ಬಲವೆಳೆಯಿತೋ
ತಳವರಿಯದ ಕಂದಕದೆಡೆಗೆ.

ತಪ್ಪಿದ್ದೀತೆಲ್ಲಿ ವಿಶ್ವ ನಿಯಮದಿ?
ಗಂಟಲೊಡೆದುದೇಕೋ ಲೋಕದ
ಸೃಸ್ಟಿರಾಗದಲ್ಲಿ?
ಹೌದು;
ಯಾರಿಗುಂಟಷ್ಟೊಂದೊಲುಮೆ, ಈ ವಿಶಾಲ
ಬಯಲಿನಲಿ. ತನ್ನದೇ ಕಕ್ಷೆ, ತನ್ನದೇ
ಪರಿಧಿ, ಎಲ್ಲರಿಗೂ. ಓಡುತಿವೆ. ತಿರುಗುತಿವೆ.
ಮಿನುಗುತಿವೆಯಲ್ಲ ಬಿದ್ದ ನಕ್ಷತ್ರದರಿವಿರದೆ.

– ಎಂಶ್ರೀ  17-Mar-1992

(remembering a great friend who was brilliant but fell off the trajectory as the years rolled by in the college)

Leave a Reply